ಹೇಸ್, ರುದರ್‍ಫರ್ಡ್
 	1822-93. ಅಮೆರಿಕದ 19ನೆಯ ಅಧ್ಯಕ್ಷ (1877-81). ಇವನು ಓಹಿಯೋದ ಡೆಲವೆರ್ ಎಂಬಲ್ಲಿ 1822 ಅಕ್ಟೋಬರ್ 4ರಂದು ಜನಿಸಿದ. ತಂದೆ ರುದರ್‍ಫರ್ಡ್, ತಾಯಿ ಸೋಫಿಯಾ ಬಿರ್ಚಾರ್ಡ್. ಇವನು ಓಹಿಯೋದ ಸಾಮಾನ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ. ಅನಂತರ ಗ್ಯಾಂಬಿಯರ್‍ನ ಕೆನ್ಯನ್ ಕಾಲೇಜಿನಿಂದ ಪದವಿ (1842) ಹಾಗೂ ಹಾರ್ವರ್ಡ್ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದ (1845). ಅನಂತರ ಸ್ಯಾಂಡಸ್ಕಿಯಲ್ಲಿ ವಕೀಲ ವೃತ್ತಿ ಆರಂಭಿಸಿದ (1845). ಸಿನ್ಸಿನಾಟಿಗೆ ತೆರಳಿ ಸಿಟಿ ಸಾಲಿಸಿಟರ್ ಆಗಿ ಸೇವೆಸಲ್ಲಿಸಿದ (1857-59). ಅನಂತರ ಸೈನ್ಯದಲ್ಲಿ ಬ್ರಿಗೇಡಿಯರ್ ಜನರಲ್ (1864), ಮೇಜರ್ ಜನರಲ್ ಆಗಿಯೂ ಸೇವೆಸಲ್ಲಿಸಿದ (1865). ಲೂಸಿ ವರ್ವೆಬ್ ಎಂಬಾಕೆಯನ್ನು ವಿವಾಹವಾದ (1852). ಅಧ್ಯಕ್ಷರ ಪತ್ನಿಯರಲ್ಲಿ ಪದವಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಈಕೆಯದು. ಶ್ವೇತಭವನದಲ್ಲಿ ಮದ್ಯಪಾನವನ್ನು ಅತಿಥಿಗಳಿಗೆ ನೀಡುವ ಸಂಪ್ರದಾಯವನ್ನು ಈಕೆ ಪಾಲಿಸದಿದ್ದುದರಿಂದ ಲೆಮ್ನೆಡ್‍ಲೂಸಿ ಎಂದು ಪ್ರಸಿದ್ಧಳಾಗಿದ್ದಳು. 

	ಪ್ರಜಾಪ್ರತಿನಿಧಿ ಸಭೆಯ ಪ್ರತಿನಿಧಿಯಾಗುವುದರ ಮೂಲಕ ರುದರ್‍ಫರ್ಡ್ ರಾಜಕೀಯ ರಂಗ ಪ್ರವೇಶಿಸಿದ (1865-67). ಅನಂತರ ಆ ಹುದ್ದೆಗೆ ರಾಜೀನಾಮೆ ನೀಡಿ ಓಹಿಯೋ ರಾಜ್ಯದ ರಾಜ್ಯಪಾಲನಾಗಿ ಎರಡು ಬಾರಿ ನಾಮಕರಣಗೊಂಡ (1868-72, 1876-77). ಅನಂತರ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಡೆಮಾಕ್ರಟಿಕ್ ಪಕ್ಷದ ಸ್ಯಾಮ್ಯುಯಲ್ ಜೆ. ಟಿಲ್ಡ್‍ನ್ ಎಂಬಾತನನ್ನು ಕೇವಲ ಒಂದು ಮತದ ಅಂತರದಿಂದ ಸೋಲಿಸಿ ಜಯಶೀಲನಾದ. 1977 ಮಾರ್ಚ್ 5ರಂದು ಅಮೆರಿಕದ 19ನೆಯ ಅಧ್ಯಕ್ಷನಾಗಿ ಪ್ರಮಾಣ ವಚನ ಸ್ವೀಕರಿಸಿದ (ಉಪಾಧ್ಯಾಕ್ಷ ವಿಲಿಯಮ್ ಎ ವೀಲ್ಹರ್). ಇವನು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗ ದೇಶದಲ್ಲಿ ಕ್ಲಿಷ್ಟಕರ ಪರಿಸ್ಥಿತಿ ಇತ್ತು. ಅನೇಕ ಹಗರಣಗಳು ಕಾಡುತ್ತಿದ್ದವು. ದೇಶದಲ್ಲಿ ಆಂತರಿಕ ಯುದ್ಧ ನಡೆಯುತ್ತಿತ್ತು. ಈತ ರಾಜತಾಂತ್ರಿಕ ಚಾಣಾಕ್ಷತನದಿಂದ ಎಲ್ಲ ಸಮಸ್ಯೆಗಳನ್ನು ನಿವಾರಿಸಿದ. ಹೊಸ ಯೋಜನೆಗಳನ್ನು ಜಾರಿಗೆ ತಂದು ದೇಶವನ್ನು ಪ್ರಗತಿಪಥದತ್ತ ಕೊಂಡೊಯ್ದ. ಸ್ಯಾನ್ ಫ್ರಾನ್ಸಿಸ್ಕೋದ ಪಶ್ಚಿಮ ತೀರಪ್ರದೇಶಕ್ಕೆ ಪ್ರಥಮ ಬಾರಿಗೆ ಭೇಟಿನೀಡಿದ ಮೊದಲ ಅಧ್ಯಕ್ಷನೆಂಬ ಕೀರ್ತಿ ಈತನದು. ಕಾನೂನು ಪದವಿ ಪಡೆದ ಪ್ರಥಮ ಅಧ್ಯಕ್ಷನೆಂಬ ಹೆಗ್ಗಳಿಕೆಯೂ ಇವನಿಗೆ ಸಲ್ಲುತ್ತದೆ. ಈತ ಡಾರ್ಕ್‍ಹಾರ್ಸ್ ಪ್ರೆಸಿಡೆಂಟ್ ಎಂಬ ಅಡ್ಡಹೆಸರಿನಿಂದಲೂ ಖ್ಯಾತವಾಗಿದ್ದ. ಈತ 1893 ಜನವರಿ 17ರಂದು ಓಹಿಯೋದ ಸ್ವೈಗೆಲ್‍ಗ್ರೋವ್ ಎಂಬಲ್ಲಿ ನಿಧನನಾದ. 			
				*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ